ಟ್ರೋಕೊಫೋರ್

	ಅನೆಲಿಡ (ವಲಯವಂತಗಳು), ಪಾಲಿಕೀಟ ಮತ್ತು ಮೃದ್ವಂಗಿಗಳ (ಮಾಲಸ್ಕ) ಜೀವನ ಚರಿತ್ರೆಯಲ್ಲಿ ಕಂಡುಬರುವ ಒಂದು ಡಿಂಬ (ಲಾರ್ವ). ನಿಷೇಚನಗೊಂಡ ಮೊಟ್ಟೆಯೊಡೆದಾಗ ಈ ಸ್ವತಂತ್ರ ಡಿಂಬ ಹೊರಬರುವುದು. ಇದರ ಆಕಾರ ಪಿಯರ್ ಹಣ್ಣಿನಂತೆ. ಡಿಂಬದ ಎಕ್ಟೋಡರ್ಮ್ ಪದರ ತೆಳುವಾಗಿರುವುದರಿಂದ ದೇಹ ಪಾರದರ್ಶಕವಾಗಿದೆ. ದೇಹದ ಮಧ್ಯದಲ್ಲಿ ಬಾಯಿ ಉಂಟು. ಬಾಯಿಯಿಂದ ಮುಂದಕ್ಕೆ ಸ್ಟೊಮೋಡಿಯಮ್ ಎಂಬ ಭಾಗ ಇದೆ. ಸ್ಟೊಮೋಡಿಯಮ್ ಕೆಳಮುಖವಾಗಿ ಬಾಗಿ ನಡುಗರುಳಿಗೆ ಸಾಗುತ್ತದೆ. ನಡುಗರುಳಿನ ಮುಂದಿನ ಭಾಗಕ್ಕೆ ಪ್ರೋಕ್ಟೋಡಿಯಮ್ ಎಂದು ಹೆಸರು. ಗುದದ್ವಾರದ ಮೂಲಕ ಇದು ಹೊರಕ್ಕೆ ತೆರೆಯುತ್ತದೆ. ದೇಹದ ಒಂದು ಕೊನೆಯಲ್ಲಿ ಎರಡು ಅಗ್ರಸ್ಥ ತಟ್ಟೆಗಳೂ ಎರಡು ನರಮುಡಿಗಳೂ ಶಿಲಕೆಗಳೂ ಇವೆ. ತಟ್ಟೆಗಳ ಕೆಳಭಾಗದಲ್ಲಿ ಒಂದು ನೇತ್ರಬಿಂದು (ಐ ಸ್ಪಾಟ್) ಉಂಟು. ಬಾಯಿಯ ಮುಂಭಾಗದಲ್ಲಿ ಶಿಲಕೆಗಳ ಒಂದು ವರ್ತುಲ ಉಂಟು. ಇದಕ್ಕೆ ಅಗ್ರವದನ ವರ್ತುಲ ಎಂದು ಹೆಸರು. ಅಂತೆಯೇ ಹಿಂಭಾಗದಲ್ಲಿ ಶಿಲಕೆಗಳ ವರ್ತುಲ ಉಂಟು. ಇದನ್ನು ಪಶ್ಚವದನವರ್ತುಲ ಎನ್ನುತ್ತಾರೆ. ಗುದದ್ವಾರದ ಸುತ್ತಲೂ ಇರುವ ಶಿಲಕೆಗಳ ವರ್ತುಲಕ್ಕೆ ಏನಲ್ ವರ್ತುಲ ಎಂದು ಹೆಸರು. ಶಿಲಕೆಗಳು ಈಜುವಿಕೆಗೆ ಸಹಾಯಮಾಡುತ್ತವೆ. ಎಕ್ಟೋಡರ್ಮ್ ಮತ್ತು ಅನ್ನನಾಳಗಳ ನಡುವೆ ಒಂದು ವಿಸ್ತಾರವಾದ ಅವಕಾಶವಿದೆ. ಇದಕ್ಕೆ ಬ್ಲಾಸ್ಟೊಸೀಲ್ ಎಂದು ಹೆಸರು. ಇದರಲ್ಲಿ ಮೀಸೆನ್‍ಕೈಮ್ ಜೀವಕೋಶಗಳು, ಡಿಂಬದ ಮೀಸೊಡರ್ಮ್ ಮತ್ತು ಒಂದು ಜೊತೆ ನೆಫ್ರೀಡಿಯಗಳಿವೆ. ನೆಫ್ರೀಡೀಯ ಸಮೀಪದಲ್ಲಿ ಒಂದು ಆಡೊಸಿಸ್ಟ್ ಇದೆ.

	ವಿವಿಧ ಪ್ರಭೇದಗಳ ಟ್ರೋಕೊಫೋರ್ ಡಿಂಬಗಳು ನೀರಿನ ಮೇಲ್ಮೈನಲ್ಲಿ ಈಜುತ್ತ ಇರುವುವು. ಇವು ಅವಸ್ಥೆಯಲ್ಲಿ 15 ಮಿನಿಟುಗಳಿಂದ ಕೆಲವು ದಿವಸಗಳ ವರೆಗೆ ಇರುವುದುಂಟು. ತೇಲುಜೀವಿಗಳು ಮತ್ತಿತ್ತರ ಸೂಕ್ಷ್ಮಜೀವಿಗಳು ಇವುಗಳ ಆಹಾರ. ಕೆಲವು ಕಾಲಾನಂತರ ವಲಯವಂತಗಳ ಟ್ರೋಕೊಫೋರ್ ಡಿಂಬ ಕಡಲ ತಡಿಯನ್ನು ಸೇರಿ ರೂಪ ಪರಿವರ್ತನೆಗೆ ಒಳಗಾಗುತ್ತದೆ. ಈ ಕಾಲದಲ್ಲಿ ಬಾಯಿಯ ಮುಂಭಾಗ ಪ್ರೋಸ್ಟೋಮಿಯಮ್ ಆಗಿ ಮಾರ್ಪಾಡುತ್ತದೆ. ಬಾಯಿಯ ಹಿಂಭಾಗ ನೀಳವಾಗುತ್ತದಲ್ಲದೆ ಖಂಡ ವಿಂಗಡಣೆಗೆ ಒಳಗಾಗುವುದು. ಪ್ರಬುದ್ಧಜೀವಿಯ ವಿವಿಧ ಅಂಗಗಳು ರೂಪುಗೊಳ್ಳುತ್ತವೆ. ಮೃದ್ವಂಗಿಗಳ ಪಟೆಲದಲ್ಲಿಯೂ ಮೇಲಿನ ಮಾದರಿಯ ಟ್ರೋಕೊಫೋರ್ ಡಿಂಬವನ್ನು ಕಾಣಬಹುದು. ಆದರೆ ಇವುಗಳಲ್ಲಿ ಈ ಡಿಂಬ ರೂಪಪರಿವರ್ತನೆಗೊಳ್ಳದೆ ಮತ್ತೊಂದು ಬಗೆಯ ಡಿಂಬವಾಗಿ ಮಾರ್ಪಡುತ್ತದೆ. ಇದಕ್ಕೆ ವೆಲಿಜರ್ ಡಿಂಬ ಎಂದು ಹೆಸರು. ಆದಿಮ ಗ್ಯಾಸ್ಟ್ರಾಪೊಡ ಮತ್ತು ಇತರ ಮೃದ್ವಂಗಿಗಳಲ್ಲಿ ಟ್ರೋಕೊಫೋರ್ ಡಿಂಬಾವಸ್ಥೆ ಮೊಟ್ಟೆಯೊಳಗಡೆಯೇ ಮುಗಿದುಹೋಗಿರುತ್ತದೆ. ಮೊಟ್ಟೆಯೊಡೆದಾಗ ಹೊರಬರುವುದು ವೆಲಿಜರ್ ಡಿಂಬ ಮಾತ್ರ.

	ಟೋಕೊಫೋರ್ ಡಿಂಬ ವಲಯವಂತಗಳ ಮತ್ತು ಮೃದ್ವಂಗಿಗಳ ವಿಕಾಸದ ಮೇಲೆ ಬೆಳಕನ್ನು ಬೀರುತ್ತದಲ್ಲದೆ ಈ ಎರಡು ವಂಶಗಳು ಒಂದೇ ಮೂಲದಿಂದ ವಿಕಾಸಗೊಂಡಿವೆ ಎಂಬುದಕ್ಕೆ ಆಧಾರವನ್ನು ನೀಡುತ್ತದೆ. 
(ಬಿ.ಕೆ.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ